Friday, May 30, 2014

ಅತಿಥಿ.... A Poem by K S Narasimhaswamy

ಶ್ರಾವಣ ಸಂಜೆಯಲಿ ನಾ ನಿನ್ನ ಕಂಡಾಗ
ಕಣ್ಣೀರು ಇಳಿದಿತ್ತು ಕೆನ್ನೆಯಲ್ಲಿ ;
ನೀನು ನೋಡುತ ನಿಂತೆ ಭಾವವಿಗ್ರಹದಂತೆ
ನನ್ನ ಮನಸಿನ ಹೂವ ತೋಟದಲ್ಲಿ.

ರಾಜಧಾನಿಯ ಮೇಲೆ ಬಂಜೆಮುಗಿಲಿನ ಕೆಂಪು,
ದೂರದೂರಕೆ ಹಕ್ಕಿ ಕೊರಳ ಇಂಪು ;
ನೀನು ಮೆಲ್ಲನೆ ಬಂದೆ, ನುಡಿಯ ಹೂಗಳ ತಂದೆ,
ಚೆಲುವ ಹಾಡಿದೆ ನಾನು ವಿಸ್ಮಯದಲಿ.

ನಾನು ಎಲ್ಲೋ ಇದ್ದೆ, ಹಾಡು ತುಂಬಿತು ನಿದ್ದೆ
ನನ್ನ ಅಮರಾವತಿಯ ಸೀಮೆಯೊಳಗೆ ;
ಕನಸ ವೀಣೆಯ ಮಿಡಿದು ಸಪ್ತಸ್ವರಂಗಳನು
ನೀ ತಂದೆ, ಹೂಗಳನು ಸುತ್ತ ವೆಲ್ಲಿ.

ಎಲ್ಲೆಲ್ಲು ಮೌನ, ನಿಶ್ಯಬ್ದತೆಯ ಹೆಜ್ಜೆಗಳು,
ಮೌಮ ಆವರಿಸಿತ್ತು ಮೇಳದಲ್ಲಿ ;
ಬಂಗಾರದುಂಗುರವ ನನ್ನ ಕೆನ್ನೆಗೆ ಒತ್ತಿ
ನಾನು ಸುಮ್ಮನೆ ನಿಂತೆ ಮೌನದಲ್ಲಿ.

ತನ್ನ ಸರದಿಯ ಮೇಲೆ ಇರುಳು ಒಮ್ಮೆಗೆ ಬಂತು,
ನಕ್ಷತ್ರಗಳ ಕಂಡೆ ಬಾನ ತುಂಬ ;
ನಿಶ್ಯಬ್ದತೆಯೆ ಮೌನವಲ್ಲ ಎಂಬುದು ಗೊತ್ತು,
ಸೇತುವೆಯ ದಾಟುತ್ತ ಮುಂದೆ ಹೋದೆ.

ಮೌನವನು ಕಲಕಿತ್ತು ಎಲ್ಲೊ ದೂರದ ಕೊಳಲು,
ನೀನು ಕಣ್ಣಿಗೆ ಬಿದ್ದೆ ಪಕ್ಕದಲ್ಲಿ ;
ನಿನ್ನ ತುಟಿಯಂಚಿನಲಿ ಹೊನ್ನ ತಾವರೆ ಅರಳಿ
ಹೊಸ ಲೋಕ ಬಂದಿತ್ತು ನನ್ನೊಲವಿಗೆ.

ಅಹುದಹುದು, ನಾನು ನಿನ್ನನು ಸೆಳೆದು ಅಪ್ಪಿದೆನು,
ನವ್ಯ ನಂದನವನದ ಸೀಮೆಯಲ್ಲಿ ;
ಚೆಲುವಿನ ನಿರಭ್ರ ಆಕಾಶದಲಿ ಶತಕೋಟಿ
ನಕ್ಷತ್ರಮಾಲೆಯನು ನಾನು ಕಂಡೆ.

ಕೆಂಪು ಕಪ್ಪಾಗಿತ್ತು, ಕಪ್ಪು ಮೋಡಗಳಲ್ಲಿ
ಸುಳಿದು ಮರೆಯಾಗಿತ್ತು ತಟ್ಟೆಮಿಂಚು ;
ನಿನ್ನೊಡನೆ ನಾನು ನನ್ನದೆ ಮನೆಗೆ ಬಂದಾಗ
ತೆರೆದ ಬಾಗಿಲು ದಾಟಿ ಒಳಗೆ ಹೋದೆ.

ಕಿಟಕಿಯನು ತೆರೆಯುತ್ತ ಮಳೆಯ ಹನಿಗಳ ಕರೆದೆ,
ದೀಪಗಳನಂಟಿಸಿದೆ ಕೋಣೆಯಳೊಗೆ ;
ಲೆಕ್ಕವಿಟ್ಟಿಲ್ಲ ಇಲ್ಲಿಗೆ ಒಲಿದು ಬಂದವರ,
ನನ್ನ ಮನೇಗೆ ನಾನು ಅತಿಥಿಯಾದೆ.